Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹರೆಯ ದಾಟಿದ ಹಯವದನನ ಮದುವೆ ಪ್ರಸಂಗ ! - 3.5/5 ****
Posted date: 28 Fri, Apr 2023 08:53:04 AM
ಆ ಸಿನಿಮಾದಲ್ಲಿ ನವರಸನಾಯಕ ಜಗ್ಗೇಶ್ ಇದ್ದಾರೆ ಅಂದಕೂಡಲೇ ಪ್ರೇಕ್ಷಕರ ಮುಖದಲ್ಲೊಂದು  ಮಂದಹಾಸ ಮೂಡುತ್ತೆ , ಅವರ ಕಾಮಿಡಿ ಡೈಲಾಗ್‌ಗಳನ್ನು ಎಂಜಾಯ್ ಮಾಡಲೆಂದೇ ಒಂದಷ್ಟು ಜನ ಥೇಟರಿಗೆ ಬರುತ್ತಾರೆ. ಈಗವರು ಮತ್ತೊಂದು ಚಿತ್ರದ ಮೂಲಕ ತೆರೆಯಮೇಲೆ ಬಂದಿದ್ದಾರೆ. ಅದೂ ರಾಜಕುಮಾರದಂಥ ಹಿಟ್ ಚಿತ್ರವನ್ನು ನೀಡಿದ  ಸಂತೋಷ್ ಆನಂದರಾಮ್ ಅವರ ಚಿತ್ರದ ಮೂಲಕ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ರಾಘವೇಂದ್ರ ಸ್ಟೊರ‍್ಸ್ ಚಿತ್ರಕ್ಕೆ ಕೆಜಿಎಫ್, ಕಾಂತಾರದ  ಹಿಟ್ ಚಿತ್ರಗಳನ್ನು ತೆರೆಗೆ ನೀಡಿದ  ಹೊಂಬಾಳೆ ಫಿಲಂಸ್ ಸಂಸ್ಥೆ ಬಂಡವಾಳ ಹಾಕಿದೆ. ಹೀಗೆ ಮೂವರು ದಿಗ್ಗಜರ ಪ್ರಯತ್ನದಿಂದ ಹುಟ್ಟಿಕೊಂಡಿರುವ ರಾಘವೇಂದ್ರ ಸ್ಟೊರ‍್ಸ್ ಮೇಲೆ ಸಹಜವಾಗಿ ಸಿನಿರಸಿಕರಲ್ಲಿ ಜಾಸ್ತಿನೇ ನಿರೀಕ್ಷೆ ಇತ್ತು. ಪ್ರೇಕ್ಷಕರ ಕುತೂಹಲವನ್ನು ತಲುಪಲು ಇವರೆಲ್ಲ ಸೇರಿ 100% ಎಫರ್ಟ್ ಹಾಕಿದ್ದಾರೆ. 
 
ಇನ್ನು ಕಥೆಯ ವಿಷಯಕ್ಕೆ ಬರೋದಾದರೆ, ಆ ಊರಲ್ಲಿ ರಾಘವೇಂದ್ರ ಸ್ಟೋರ್ಸ್ ಶುಚಿ ಮತ್ತು ರುಚಿಗೆ ಹೆಸರುವಾಸಿ. ಗುಂಡಭಟ್ರು(ದತ್ತಣ್ಣ) ಅದರ ಯಜಮಾನ. ಮದುವೆ ಮುಂಜಿಗಳಿಗೆ ಕೇಟರಿಂಗ್ ಸರ್ವಿಸ್ ಕೊಡುವ ಮೂಲಕ  ಸುತ್ತಮುತ್ತಲೂ ಇವರೇ ಫೇಮಸ್ ಆಗಿರುತ್ತಾರೆ.
 
ರಾಘವೇಂದ್ರ ಸ್ಟೋರ್ಸ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ಗುಂಡಭಟ್ರು ಮಗ ಹಯವದನ(ಜಗ್ಗೇಶ್)ನಿಗೆ ಆಗಿನ್ನೂ 40ರ ಹರೆಯ !. ವಯಸು ನಲವತ್ತಾದರೂ ಹಯವದನನಿಗೆ ಕಂಕಣಭಾಗ್ಯ ಅನ್ನೋದು ಕೂಡಿಬಂದಿರಲ್ಲ. 
 
ಹೆಣ್ಣು ನೋಡಲೆಂದು ಹೋದ  ಜಗ್ಗೇಶ್ ಬಿಟ್ಟು ಆ ಹುಡುಗಿ ಜಗ್ಗೇಶ್ ತಮ್ಮನನ್ನು ಇಷ್ಟಪಟ್ಟು ಮದುವೆ ಆಗುತ್ತಾರೆ. ಹೀಗೆ ಹಯವದನನ ಮದುವೆ ಭಾಗ್ಯ ಒಂದಲ್ಲ ಒಂದು ಕಾರಣಕ್ಕೆ ಮುಂದೆ ಹೋಗುತ್ತಲೇ ಇರುತ್ತದೆ. ನೋಡಲು ಹೋದ ಹುಡುಗಿಯರೆಲ್ಲ  ಆತನನ್ನು ರಿಜೆಕ್ಟ್ ಮಾಡುತ್ತಾರೆ. ಇಂಥ ಯುವಕನಿಗೆ ಅಂತೂ ಇಂತೂ ಕಂಕಣಬಾಗ್ಯ ಕೂಡಿಬಂದು  ಮದುವೆಯೂ ಆಗುತ್ತದೆ. ಆನಂತರ ಏನೇನೆಲ್ಲ ಅವಾಂತರಗಳಾಗುತ್ತವೆ, ಮದುವೆ ವಯಸ್ಸು ದಾಟಿದಮೇಲೆ ಮದುವೆಯಾದರೆ ಹುಟ್ಟಿಕೊಳ್ಳುವ ಸಮಸ್ಯೆಗಳೇನು, ತಾನೊಂದು ಮದುವೆಯಾಗಲು ಹಯವದನ ಏನೇನೆಲ್ಲ ಸರ್ಕಸ್ ಮಾಡುತ್ತಾನೆ  ಎಂಬುದನ್ನು  ನಿರ್ದೇಶಕರು  ಹಾಸ್ಯಭರಿತ ಕಥೆಯ ಮೂಲಕ  ಹೇಳೋ ಪ್ರಯತ್ನ ಮಾಡಿದ್ದಾರೆ.
 
ಜಗ್ಗೇಶ್ ಅಭಿಮಾನಿಗಳು ನಿರೀಕ್ಷೆ ಮಾಡುವಂಥ ಎಲ್ಲ ಮಸಾಲೆ ಅಂಶಗಳೂ ಈ ಚಿತ್ರದಲ್ಲಿವೆ. ಇಡೀ ಚಿತ್ರವನ್ನು ಜಗ್ಗೇಶ್ ಅವರೇ ಆವರಿಸಿಕೊಂಡಿರುವುದು ವಿಶೇಷ, ತಮ್ಮ ವಿಶಿಷ್ಠ ಮ್ಯಾನರಿಸಂನಿಂದ ಪ್ರೇಕ್ಷಕರನ್ನು ನಕ್ಕು ನಗಿಸುವ ಅವರು, ವಯಸ್ಸಾದರೂ ಮದುವೆಯಾಗದೆ ಪರಿತಪಿಸುವ ವ್ಯಕ್ತಿಯಾಗಿ ಭಾವಪೂರ್ಣ ಅಭಿನಯ ನೀಡಿದ್ದಾರೆ.  ಎಮೋಷನಲ್ ದೃಶ್ಯಗಳಲ್ಲಿ ಜಗ್ಗೇಶ್, ನೋಡುಗರನ್ನು ಭಾವುಕರನ್ನಾಗಿಸಿದ್ದಾರೆ. 
 
ನಿರ್ದೇಶಕ ಸಂತೋಷ್ ಈ ಚಿತ್ರದಲ್ಲಿ ಒಂದು ಸಂದೇಶವನ್ನೂ ಇಟ್ಟಿದ್ದಾರೆ. ಅದೇನು ಅಂತ ನೀವು ಥೇಟರಿನಲ್ಲೇ ನೋಡಬೇಕು. ಫಸ್ಟ್ ಹಾಫ್‌ ನಲ್ಲಿ ಸರಳವಾಗಿಯೇ ಕಥೆ ಹೇಳಿಕೊಂಡು ಹೋಗಿರುವ ನಿರ್ದೇಶಕರು, ಮದ್ಯಂತರದ ವೇಳೆಗೆ ಕಥೆಯಲ್ಲಿ ಸಣ್ಣದೊಂದು ತಿರುವು ನೀಡಿದ್ದಾರೆ. ಚಿತ್ರದ ಕೊನೆಯ 30 ನಿಮಿಷಗಳಲ್ಲಿ ಬರುವ ಜಗ್ಗೇಶ್‌ರ ಎಮೋಷನಲ್ ದೃಶ್ಯಗಳು ನೋಡುಗರಿಗೆ ಆಪ್ತ ಎನಿಸುತ್ತವೆ. ಕ್ಲೈಮ್ಯಾಕ್ಸ್ ನಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಿದ ಗೌರವ ಭಾವುಕರನ್ನಾಗಿಸುತ್ತೆ.
 
ಮದುವೆ, ಸಮಾರಂಭಗಳಲ್ಲಿ ಹಾಡುವ, ವಯಸು ಮೂವತ್ತಾರು  ದಾಟಿದರೂ ಮದುವೆಯಾಗದ ವೈಜಯಂತಿ ಪಾತ್ರದಲ್ಲಿ  ಶ್ವೇತಾ ಶ್ರೀವಾತ್ಸವ್  ಕಾಣಿಸಿಕೊಂಡಿದ್ದು, ತಮಗೆ ಸಿಕ್ಕಂಥ ಪಾತ್ರಕ್ಕೆ ಜೀವ ತುಂಬಿದ್ದಾರೆ. ಗುಂಡಭಟ್ರು ಪಾತ್ರದಲ್ಲಿ ದತ್ತಣ್ಣ ಕೂಡ ಮಾಗಿದ ಅಭಿನಯ ನೀಡಿದ್ದಾರೆ. ವಿಶೇಷ ಅಂದ್ರೆ ಅಚ್ಯುತ್ ಕುಮಾರ್ ಗೆ ಇಲ್ಲಿ  ನೆಗೆಟಿವ್ ಪಾತ್ರ ಸಿಕ್ಕಿದೆ. ಅಜನೀಶ್ ಲೋಕನಾಥ್ ಅವರ ಸಂಗೀತವಿರುವ ಸಿಂಗಲ್ ಸುಂದ್ರ ಹಾಡು ಚೆನ್ನಾಗಿದೆ. ಹಿನ್ನೆಲೆ ಸಂಗೀತವು ಚಿತ್ರದ ಜೀವಂತಿಕೆಯನ್ನು ಹೆಚ್ಚಿಸಿದೆ,  ಅದ್ಭುತ ಎನ್ನುವಂತೆ ಶ್ರೀಶ ಕೂದುವಳ್ಳಿ ಅವರು ಕ್ಯಾಮೆರಾ ವರ್ಕ್ ಮಾಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹರೆಯ ದಾಟಿದ ಹಯವದನನ ಮದುವೆ ಪ್ರಸಂಗ ! - 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.